ಅರವತ್ತರ ದಶಕದಲ್ಲಿ ತೆರೆಕಂಡ ‘ಸತ್ಯ ಹರಿಶ್ಚಂದ್ರ’ ಚಿತ್ರವನ್ನು ನೋಡದವರು ವಿರಳ. ಪ್ರಾಮಾಣಿಕರನ್ನು ನಿಂದಿಸುವಾಗಲೂ ನೀನು ಸತ್ಯ ಹರಿಶ್ಚಂದ್ರನೇ ಎಂದು ಮೂದಲಿಸುವವರಿಗೆ ಕೊರತೆಯಿಲ್ಲ. ಗಾಂಧಿನಗರದಲ್ಲಿ ಈಗ ಸತ್ಯದ ಹುಡುಕಾಟ ನಡೆದಿದೆ. ಕಾಮಿಡಿ ಕಿಂಗ್ ಶರಣ್ ಸತ್ಯ ಹರಿಶ್ಚಂದ್ರನ ಅವತಾರ ತಳೆದಿದ್ದಾರೆ.
ವರನಟ ಡಾ.ರಾಜ್‌ಕುಮಾರ್ ಅಭಿನಯದ ಸತ್ಯ ಹರಿಶ್ಚಂದ್ರ ಸಿನಿಮಾಕ್ಕೂ ಮತ್ತು ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಚಿತ್ರದ ಟೈಟಲ್ ಅನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಪಂಜಾಬಿ ಚಿತ್ರದ ಎಳೆಯೊಂದರನ್ನು ಆಧರಿಸಿ ಈ ಚಿತ್ರ ಸಿದ್ಧಗೊಂಡಿದೆ. ಈಚೆಗೆ ಚಿತ್ರತಂಡವು ಚಿತ್ರದ ಆಡಿಯೋ ಬಿಡುಗಡೆ ಮಾಡಿತು.
ನಿರ್ಮಾಪಕ ಕೆ. ಮಂಜು, ‘ಅಧ್ಯಕ್ಷ’ ಚಿತ್ರದ ಬಳಿಕ ಶರಣ್ ಈ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಪೋರ್ಚುಗಲ್‌ನಲ್ಲಿ ಫೈಟ್, ಹಾಡಗಳನ್ನು ಚಿತ್ರೀಕರಿಸಲಾಗಿದೆ. ಇದಕ್ಕೆ ಹೆಚ್ಚು ಖರ್ಚಾಯಿತು. ಆದರೆ, ಪರದೆ ಮೇಲೆ ಚಿತ್ರ ನೋಡಿದಾಗ ಎಲ್ಲವೂ ಮರೆತು ಹೋಗುತ್ತದೆ. ಸೆನ್ಸಾರ್ ಮಂಡಳಿಯು ಯು/ಎ ಅರ್ಹತಾ ಪತ್ರ ನೀಡಿದೆ ಎಂದ ಅವರು, ಇನ್ನು ಮುಂದೆ ವರ್ಷಕ್ಕೆ ಎರಡರಿಂದ ಮೂರು ಚಿತ್ರ ಮಾಡುವ ಭರವಸೆ ನೀಡಿದರು.
‘ಕುಲದಲ್ಲಿ ಮೇಲಾವುದೋ... ಹಾಡನ್ನು ಅಧಿಕೃತವಾಗಿ ಅನುಮತಿ ಪಡೆದುಕೊಂಡು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಇಂತಹ ಬೆಳವಣಿಗೆ ಎಲ್ಲರಲ್ಲೂ ಬರಬೇಕು’ ಎಂದ ಲಹರಿ ವೇಲು ಅವರು, ಗಾಂಧಿನಗರದಲ್ಲಿ ಸತ್ಯ ಇಲ್ಲ ಸರ್ಟಿಫಿಕೇಟ್ ನೀಡಿದರು.
ನಾಯಕಿ ಸಂಚಿತಾ ಪಡುಕೋಣೆ, ‘ಇತರೇ ಭಾಷೆಯಲ್ಲಿ ನಟಿಸುವಾಗ ಕನ್ನಡದಲ್ಲಿ ಯಾಕೆ ಅಭಿನಯಿಸುತ್ತಿಲ್ಲ ಎಂಬ ಪ್ರಶ್ನೆ ಎದುರಾಗುತ್ತಿತ್ತು. ಈ ಸಿನಿಮಾವೂ ಇದಕ್ಕೆ ಉತ್ತರ ನೀಡಿದೆ’ ಎಂದಷ್ಟೇ ಹೇಳಿದರು.
‘ಮೂಲ ಚಿತ್ರಕ್ಕೆ ಎಲ್ಲಿಯೂ ಧಕ್ಕೆಯಾಗದಂತೆ ಚಿತ್ರ ಮಾಡಲಾಗಿದೆ. ಆ ಚಿತ್ರದಲ್ಲಿ ಸತ್ಯ ಹರಿಶ್ಚಂದ್ರ ಎಷ್ಟೇ ಕಷ್ಟ ಎದುರಾದರೂ ಸತ್ಯ ಹೇಳುತ್ತಿರುತ್ತಾನೆ. ನಾನು ಬಾಯಿಬಿಟ್ಟರೆ ಸುಳ್ಳು ಹೇಳುತ್ತೇನೆ. ಆದರೆ, ಅಂತಿಮವಾಗಿ ಸತ್ಯವೇ ಜಯಿಸುತ್ತದೆ’ ಎಂದು ಪಾತ್ರದ ಗುಟ್ಟು ಬಿಟ್ಟುಕೊಟ್ಟರು ಶರಣ್.
‘ನಾನು ನಾಯಕನ ಸ್ಥಾನಕ್ಕೇರಲು ಅರ್ಜುನ್ ಜನ್ಯ ಕಾರಣ. ರ‍್ಯಾಂಬೋ ಚಿತ್ರದ ಹಾಡುಗಳನ್ನು ಗಣೇಶ್ ಬಿಡುಗಡೆ ಮಾಡಿದ್ದರು. ಹಾಡುಗಳು ಹಿಟ್ ಆಗಿದ್ದವು. ಶರತ್ ಲೋಹಿತಾಶ್ವ ಅವರ ಕಂಠ, ಅಭಿನಯ ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ನಾಲ್ಕು ಗೋಡೆ ಮಧ್ಯೆ ಕಾಮಿಡಿ ಸೃಷ್ಟಿ ಮಾಡುವುದು ಕಷ್ಟ. ಆದರೆ, ನಿರ್ದೇಶಕರು ಹಾಸ್ಯದೃಶ್ಯವನ್ನು ಚೆನ್ನಾಗಿ ನಿರೂಪಿಸಿದ್ದಾರೆ’ ಎಂದರು ಶರಣ್.
‘ಯಾವುದೇ ಚಿತ್ರ ಮಾಡಿದರೂ ಘನತೆ ಇರುತ್ತದೆ. ದಯಾಳ್ ಪದ್ಮನಾಭನ್ ಉತ್ತಮ ತಂತ್ರಜ್ಞರು. ಅವರು ಕಥೆ ಹೇಳುವ ರೀತಿಯಲ್ಲಿ ಭಿನ್ನವಾಗಿರುತ್ತದೆ. ರ‍್ಯಾಂಬೋದಲ್ಲಿ ಒಂದು ನಿಮಿಷದ ಸನ್ನಿವೇಶಕ್ಕೆ ಹಿನ್ನೆಲೆ ಧ್ವನಿ ನೀಡಲು ಹೋದೆ. ಕೊನೆಗೆ, ಇಡೀ ಚಿತ್ರಕ್ಕೆ ಧ್ವನಿ ನೀಡುವ ಅವಕಾಶ ಒದಗಿ ಬಂದಿತ್ತು’ ಎಂದು ನೆನಪಿಗೆ ಜಾರಿದರು ನಟ ಗಣೇಶ್.
‘ಬದುಕಿನಲ್ಲಿ ಸರಳತೆ ಉಳಿಸಿಕೊಂಡಿದ್ದು, ಗೊಂದಲಗಳು ತಲೆದೋರಿದಾಗ ನಾಯಕ ಅದನ್ನು ಹೇಗೆ ಎದುರಿಸುತ್ತಾನೆ ಎಂಬುದೇ ಚಿತ್ರದ ಕಥಾಹಂದರ’ ಎಂದರು ನಾಯಕಿ ಭಾವನಾರಾವ್.
0 comments:
Post a Comment