Saturday, September 16, 2017

ಹೊಸ ಅವತಾರದಲ್ಲಿ ‘ನಂಜುಂಡಿ ಕಲ್ಯಾಣ’!


1989ರಲ್ಲಿ ಜನರ ಮನಸೂರೆಗೊಂಡಿದ್ದ, ರಾಘವೇಂದ್ರ ರಾಜ್‌ಕುಮಾರ್‌ ಅಭಿನಯದ ಚಿತ್ರ ‘ನಂಜುಂಡಿ ಕಲ್ಯಾಣ’. ಈಗ ಇದೇ ಹೆಸರಿನ ಇನ್ನೊಂದು ಚಿತ್ರ ತೆರೆಯ ಮೇಲೆ ಬರಲಿದೆ. ಈಗಿನ ‘ನಂಜುಂಡಿ ಕಲ್ಯಾಣ’ವನ್ನು ತೆರೆಗೆ ತರುತ್ತಿರುವವರು ನಿರ್ದೇಶಕ ರಾಜೇಂದ್ರ ಕಾರಂತ ಅವರು. ಈ ಚಿತ್ರದ ನಾಯಕ ಮತ್ತು ನಾಯಕಿಯಾಗಿ ಬಣ್ಣ ಹಚ್ಚಿರುವವರು ತನುಷ್ ಮತ್ತು ಶ್ರಾವ್ಯಾ. ಶಿವಣ್ಣ ದಾಸನಪುರ ಇದರ ನಿರ್ಮಾಪಕರು.
ಹೊಸ ‘ನಂಜುಂಡಿ ಕಲ್ಯಾಣ’ದ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಈಚೆಗೆ ನಡೆಯಿತು. ಮಾತು ಆರಂಭಿಸಿದ ನಿರ್ದೇಶಕ ಕಾರಂತ ಅವರು, ‘ರಾಘವೇಂದ್ರ ರಾಜ್‌ಕುಮಾರ್‌ ಅಭಿನಯಿಸಿದ್ದ ಸಿನಿಮಾ ಐಕಾನಿಕ್‌ ಆಗಿತ್ತು. ಈಗ ನಾವು ಮಾಡುತ್ತಿರುವುದು ಅಷ್ಟೇನೂ ದೊಡ್ಡದಲ್ಲದ ಸಿನಿಮಾ’ ಎಂಬ ಸ್ಪಷ್ಟನೆ ನೀಡಿದರು. ಅಂದಹಾಗೆ, ಈ ಚಿತ್ರಕ್ಕೆ ಈ ಹೆಸರು ಇಡಲು ರಾಘವೇಂದ್ರ ರಾಜ್‌ಕುಮಾರ್‌ ಅವರು ಒಪ್ಪಿಗೆ ಸೂಚಿಸಿದ್ದಾರಂತೆ.
‘ಹಟಮಾರಿ ತಾಯಿಯನ್ನು ಒಲಿಸಿ, ತಾನು ಇಷ್ಟಪಟ್ಟ ಹುಡುಗಿಯನ್ನು ನಂಜುಂಡಿ ಹೇಗೆ ಮದುವೆ ಆಗುತ್ತಾನೆ ಎಂಬುದೇ ಈ ಸಿನಿಮಾದ ವಸ್ತು’ ಎಂದರು ಕಾರಂತ. ತಾಯಿಯ ಪಾತ್ರದ ಹೊಣೆ ಪದ್ಮಜಾ ರಾವ್ ಅವರ ಹೆಗಲೇರಿದೆ. ನಂಜುಂಡಿಗೆ ಇಷ್ಟವಾಗುವ ಹುಡುಗಿಯ ಪಾತ್ರವನ್ನು ಶ್ರಾವ್ಯಾ ಅಭಿನಯಿಸುತ್ತಿದ್ದಾರೆ.
‘ಶ್ರಾವ್ಯಾ ಅವರು ನಟನೆ ಮಾಡುವುದಿಲ್ಲ. ಅವರು ಭಾವನೆಗಳನ್ನು ಜೀವಿಸುತ್ತಾರೆ’ ಎಂಬ ಮೆಚ್ಚುಗೆಯ ಮಾತುಗಳು ಕಾರಂತ ಅವರಿಂದ ಬಂದಿವೆ. ಈ ಚಿತ್ರದಲ್ಲಿ ದ್ವಂದ್ವಾರ್ಥ ನೀಡುವ ಸಂಭಾಷಣೆಗಳೂ ಅಷ್ಟಿಷ್ಟು ಇವೆ. ಈ ಬಗ್ಗೆ ವಿವರಣೆ ನೀಡಿದ ಕಾರಂತ, ‘ಅಶ್ಲೀಲತೆಯ ಗೆರೆ ದಾಟದಂತೆ, ತುಂಟತನದಿಂದ ಸಿನಿಮಾ ಮಾಡಿದ್ದೇವೆ’ ಎಂದರು.
ಕಾರ್ಯಕ್ರಮದ ಆರಂಭದಲ್ಲೇ ಮಾತನಾಡಿದ ನಟ ತನುಷ್, ‘ಒಂದು ವರ್ಷದ ಹಿಂದೆ ಮಡಮಕ್ಕಿ ಎಂಬ ಸಿನಿಮಾ ಮಾಡಿದ್ದೆವು. ಗಂಭೀರ ವಿಷಯವೊಂದನ್ನು ಅದು ಕಥಾವಸ್ತುವನ್ನಾಗಿ ಹೊಂದಿತ್ತು. ಆದರೆ, ಅದಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯಲಿಲ್ಲ. ಹಾಗಾಗಿ, ಈ ಬಾರಿ ಹಾಸ್ಯ ವಸ್ತುವೊಂದನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ’ ಎಂದರು.
‘ಮಡಮಕ್ಕಿ’ ಸಿನಿಮಾಕ್ಕೆ ₹ 4 ಕೋಟಿ ಖರ್ಚು ಮಾಡಿದ್ದರಂತೆ. ಆದರೆ, ಅದರಲ್ಲಿನ ಶೇಕಡ 10ರಷ್ಟು ಹಣ ಕೂಡ ಹಿಂದಕ್ಕೆ ಬರಲಿಲ್ಲ ಎಂದರು ತನುಷ್. ಹಿರಿಯ ಕಲಾವಿದ ಮಂಜುನಾಥ ಹೆಗಡೆ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ‘ನಗುವುದಕ್ಕೆ ಒಂದು ಔಷಧ ಸೇವಿಸಿ ಸಿನಿಮಾ ಮಂದಿರಕ್ಕೆ ಬಂದಂತೆ ಇರುತ್ತದೆ ಈ ಚಿತ್ರ ವೀಕ್ಷಿಸುವಾಗಿನ ಅನುಭವ’ ಎಂದರು ಹೆಗಡೆ.
ನಿರ್ದೇಶಕ ಕಾರಂತ ಅವರಿಂದ ಹೊಗಳಿಕೆಯ ಮಾತು ಕೇಳಿಸಿಕೊಂಡ ಶ್ರಾವ್ಯಾ ಖುಷಿಯಾಗಿದ್ದರು. ತಮ್ಮ ಮಾತಿನ ಸರದಿ ಬಂದಾಗ ಶ್ರಾವ್ಯಾ, ‘ನಿರ್ದೇಶಕರಿಂದ ಒಳ್ಳೆಯ ಮಾತು ಹೇಳಿಸಿಕೊಳ್ಳುವುದು ನನ್ನ ಗುರಿಯಾಗಿತ್ತು. ಅದು ಇಂದು ಈಡೇರಿದೆ’ ಎಂದರು. ಶ್ರಾವ್ಯಾ ಅವರದ್ದು ಮಧ್ಯಮ ವರ್ಗದ ಹುಡುಗಿಯ ಪಾತ್ರವಂತೆ ಈ ಸಿನಿಮಾದಲ್ಲಿ.
- (ಪ್ರಜಾವಾಣಿ)

0 comments:

Post a Comment

Copyright © Emediakarnataka | Designed With By Blogger Templates
Scroll To Top