Thursday, September 28, 2017

ಬಿಬಿಎಂಪಿ 51ನೆ ಮೇಯರ್ ಆಗಿ ಕಾಂಗ್ರೆಸ್‍ನ ಸಂಪತ್‍ರಾಜ್


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 51ನೆ ಮೇಯರ್ ಆಗಿ ಕಾಂಗ್ರೆಸ್‍ನ ಸಂಪತ್‍ರಾಜ್ ಹಾಗೂ 50ನೆ ಉಪಮೇಯರ್ ಆಗಿ ಜೆಡಿಎಸ್‍ನ ಪದ್ಮಾವತಿ ನರಸಿಂಹಮೂರ್ತಿ ಶುಕ್ರವಾರ (ಸೆ. 28) ಅವರು ಆಯ್ಕೆಯಾದರು.
ಬಿಜೆಪಿ ಸದಸ್ಯರು ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ‘ಎಂಟು ಜನ ನಕಲಿ ಮತದಾರರಿದ್ದು, ನಮಗೆ ನ್ಯಾಯ ಸಿಗುವುದಿಲ್ಲ’ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸಭೆಯಿಂದ ಹೊರನಡೆದರು. ಬಳಿಕ ಕಾಂಗ್ರೆಸ್‍ನ ಸಂಪತ್‍ರಾಜ್, ಜೆಡಿಎಸ್‍ನ ಪದ್ಮಾವತಿ ಅವರು ಕ್ರಮವಾಗಿ ಮೇಯರ್-ಉಪಮೇಯರ್ ಆಗಿ ಆಯ್ಕೆ ಆಗಿರುವುದನ್ನು ಚುನಾವಣಾಧಿಕಾರಿ ಜಯಂತಿ ಅವರು ಘೋಷಿಸಿದರು.


ಬಿಬಿಎಂಪಿ ಕೌನ್ಸಿಲ್ ಹಾಲ್‍ನಲ್ಲಿ ಚುನಾವಣೆ ನಡೆಯಿತು. 266 ಮತದಾರರನ್ನು ಹೊಂದಿರುವ ಮೇಯರ್-ಉಪಮೇಯರ್ ಚುನಾವಣೆಯಲ್ಲಿ 198 ಪಾಲಿಕೆ ಸದಸ್ಯರು, 28 ಎಂಎಲ್‍ಎ, 25 ಎಂಎಲ್‍ಸಿ, 5 ಲೋಕಸಭಾ ಸದಸ್ಯರು, 10 ರಾಜ್ಯಸಭಾ ಸದಸ್ಯರು ಮತದಾನಕ್ಕೆ ಅರ್ಹತೆ ಹೊಂದಿದ್ದು, ಬಹುಮತಕ್ಕೆ 134 ಮತಗಳ ಅಗತ್ಯವಿತ್ತು. ಕಾಂಗ್ರೆಸ್ ಬಿಬಿಎಂಪಿ ಸದಸ್ಯರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ 109 ಹಾಗೂ ಜೆಡಿಎಸ್ 24, ಪಕ್ಷೇತರರು 7 ಸೇರಿ ಬಹುಮತ ಪಡೆಯುವ ಮೂಲಕ ನಿರೀಕ್ಷೆಯಂತೆ ಮೇಯರ್-ಉಪಮೇಯರ್ ಆಯ್ಕೆ ಆಯಿತು.
ದೇವರಜೀವನಹಳ್ಳಿ ವಾರ್ಡ್‍ನ ಕಾಂಗ್ರೆಸ್ ಸದಸ್ಯ ಸಂಪತ್‍ರಾಜ್, ಎರಡನೇ ಬಾರಿ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರು ಎನ್‍ಎಸ್‍ಯುಐ ಕಾರ್ಯಕರ್ತರಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಬಿ.ಇ ಮೆಕಾನಿಕಲ್ ಇಂಜಿನಿಯರ್‌ ವ್ಯಾಸಂಗ ಮಾಡಿದ್ದಾರೆ.
 

0 comments:

Post a Comment

Copyright © Emediakarnataka | Designed With By Blogger Templates
Scroll To Top